ಸಾಲ್ಬಾಯ್ ಒಪ್ಪಂದ

	ಮರಾಠರಿಗೂ ಬ್ರಿಟಿಷರಿಗೂ ಏರ್ಪಟ್ಟ ಪ್ರಮುಖ ಒಪ್ಪಂದಗಳಲ್ಲೊಂದು (1782 ಮೇ 17). ಇದು ಮರಾಠ ಸರದಾರ ಮಹದಾಜಿ ಸಿಂಧ್ಯನಿಗೂ ಬ್ರಿಟಿಷರಿಗೂ (ವಾರನ್ ಹೇಸ್ಟಿಂಗ್ಸ್) ಸಿಂಧ್ಯನ ಮಧ್ಯಸ್ಥಿಕೆಯಿಂದ ಮಾಡಿಕೊಂಡ ಒಪ್ಪಂದ. ಒಪ್ಪಂದದ ಷರತ್ತುಗಳಿವು: ಆಂಗ್ಲೊ-ಮರಾಠಯುದ್ಧ ಕೊನೆಗೊಂಡಿದ್ದು, ಪುರಂದರ ಒಪ್ಪಂದ ಕಾಲದಲ್ಲಿ ಗೆದ್ದುಕೊಂಡಿದ್ದ ಪ್ರದೇಶಗಳಲ್ಲಿ ಇಂಗ್ಲಿಷರು ಸಾಲ್ಸೆಟ್ ಹೊರತುಪಡಿಸಿ ಮಿಕ್ಕೆಲ್ಲವನ್ನು ಹಿಂದಿರುಗಿಸುವುದು; ಮಾಧವರಾವ್ ನಾರಾಯಣನನ್ನು ಅಧಿಕೃತ ಪೇಶ್ವೆಯೆಂದು ಮಾನ್ಯಮಾಡುವುದು; ರಘೋಬನನ್ನು ಬಿಡುಗಡೆಮಾಡಿ ವರ್ಷಕ್ಕೆ 25ಸಾವಿರ ಮಾಶಾಸನ ನೀಡುವುದು; ಜಮುನಾನದಿ ಪಶ್ಚಿಮ ಪ್ರದೇಶವನ್ನು ಸಿಂಧ್ಯನಿಗೆ ಕೊಡುವುದು; ಈ ಒಪ್ಪಂದದಲ್ಲಿ ಹೈದರ್‍ಅಲಿ ಭಾಗಿಯಲ್ಲದಿದ್ದರೂ ತಾನು ಆರ್ಕಾಟಿನ ನವಾಬನಿಂದ ಗೆದ್ದ ಪ್ರದೇಶವನ್ನು ಬಿಟ್ಟುಕೊಡುವುದು. ಈ ಒಪ್ಪಂದದಿಂದ ಇಂಗ್ಲಿಷರಿಗೆ ಹೆಚ್ಚಿನ ಲಾಭವಾಗಲಿಲ್ಲ, ಇದರಿಂದಾಗಿ ಕಂಪನಿ ಸರ್ಕಾರದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿತು. ಆದರೆ ಈ ಒಪ್ಪಂದದಿಂದಾಗಿ ಇಂಗ್ಲಿಷರು ಮತ್ತು ಮರಾಠರ ನಡುವೆ 20 ವರ್ಷಕಾಲ ಶಾಂತಿ ನೆಲೆಸಿತ್ತು. ಇಂಗ್ಲಿಷರು ತಮ್ಮ ಶತ್ರುವಾದ ಟಿಪ್ಪುವಿನೊಡನೆ ಹೋರಾಡಲು ಇದರಿಂದ ಅನುಕೂಲವಾಯಿತು. ನಿಜಾಮ್ ಹಾಗೂ ಜೌಧ್‍ನ ನವಾಬರನ್ನು ತಮ್ಮ ಹತೋಟಿಯಲ್ಲಿಡಲು ಸುಲಭವಾಯಿತು.					
	(ಎಚ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ